Thursday, July 08, 2010

ಮನದ ಮುಗಿಲಿನಲ್ಲಿ

ಕಾಂತಿಹೀನ ಪಡುನೇಸರ ಬೇಸರ ಕಳೆದು  
ಮೂಡಲದಿಕ್ಕಿನಲಿ ಕಾಂತಿವೆತ್ತ ರವಿಯಾದ 
ನೆಗೆಯುವ ಕೆಂದೂಳಿ ಹೊತ್ತು ತಂದು 
ನೀಲಿ ಬಾನಿಗೆ ಕಿತ್ತಳೆ ಬಣ್ಣ ಬಳಿದ 

ಮುಗಿಲ ಖೈದಿಯಾಗಿ ಬದುಕು ಬೇಡವೆಂದು 
ಮಳೆರಾಯನವನು ಮುಸುಲಧಾರೆಯಾದ    
ಹನಿ ಹನಿ ಮುಂಗಾರು ತಂದು
ಇಳೆಯ ಧಗೆಯ ಲಘುವಾಗಿಸಿದ 

ಹನಿಯು ಬರಿದಾಗಿ ಚಿಂತೆ ಕಾಡಲು 
ಬಿರಿಯುವ ಬಿಸಿಲ್ಗುದುರೆಯಾದ 
ಸಪ್ತ ವರ್ಣಗಳ ಚಿತ್ತಾರ ತಂದು 
ರಂಗು-ರಂಗಿನ ಮಳೆಬಿಲ್ಲು ರಚಿಸಿದ 

ಅಮಾವಾಸ್ಯೆ ಇರುಳ ಕರಿನೆರಳಿಗೆ ಬೆಚ್ಚಿ ಬಿದ್ದು 
ಶಶಾಂಕನವನು ನಾಗಲೋಟದ ಕೋಲ್ಮಿಂಚಾದ 
ಬೆಳ್ಳಿ ಕೊಡೆ ಹೊತ್ತು ತಂದು 
ಕಪ್ಪಡರಿದ ಕಾರ್ಮುಗಿಲಿಗೆ ಕಿಚ್ಚನಚ್ಚಿದ

0 comments: