Sunday, June 20, 2010

ಶಾಲ್ಮಲಾ

ಶಾಲ್ಮಲಾ ನದಿ ಧಾರವಾಡದಲ್ಲಿ ಹುಟ್ಟಿ ಅಂತರಗಂಗೆಯಾಗಿ ಹರಿದು ಮಂಗಳೂರಿನಲ್ಲಿ ಮೇಲೆ ಬರುತ್ತಾಳೆ. ಅಲ್ಲಿನ ಜನಕ್ಕೆ ನೀರನು ಎರೆಯುತ್ತಾಳೆ. ಹೆಚ್ಚಾದ ನೀರು ವ್ಯರ್ಥವಾಗಿ ಅರಬ್ಬೀ ಸಮುದ್ರ ಸೇರುತ್ತದೆ. ಧಾರವಾಡದಲ್ಲಿ ನೋಡಿದರೆ ವಾರಕ್ಕೆ ಒಮ್ಮೆ ನೀರು ಬರುವಂತಹ ಪರಿಸ್ಥಿತಿ. ಅಲ್ಲಿನ ಜನರಿಗೆ ನೀರು-ನಿಡಿ ಇಲ್ಲದೇ ಇರುವಾಗ ತನ್ನೂರಿನ ಶಾಲ್ಮಲಾ ದೂರದೂರಿನ ಜನರಿಗೆ ಪರೋಪಕಾರಿಯಾದರೆ ಧಾರವಾಡದ ಜನರ ಅಳಲನ್ನು ಹೀಗೆ ಬರೆಯಬಹುದೆ? ಉತ್ತರ ಕನ್ನಡ ಭಾಷೆಯಲ್ಲಿ ಬರೆದರೆ ಆ ಅವ್ಯಕ್ತ ಭಾವನೆಗಳು ಹೇಗೆ ಹೊರಹೊಮ್ಮಬಹುದು?

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಬಾಳು ನೀ ಹಂಸಾಲ
ನನ್ನೂರಲಿ ಹುಟ್ಟಿ ದೂರದೂರಿಗೆ ನೀರಡಿಸಾಂವ?
ಹಂಗ್ಯಾಕ್ ಮಾಡ್ಲಿಕ್ ಹೊರಟ್ಯವ್ವ?
ನಿನ್ ತವರೂರಿನ ಹಸಿರು ಬಾಡ್ಯಾಂವಾ,
ಆಕಳು-ಜಾನುವಾರು ದಾಹದಿ ಕಂಗೆಟ್ಟ್ಯಾಂವಾ
ಮೀನೂ-ಜೀಂವ-ಜಂತು ಉಸಿರಿಲ್ದಿ ಸಾಯೋಕ್ ಹೊರಟ್ ನಿಂತ್ಯಾಂವ
ಬಾರೇ ನೀ ಶಾಲ್ಮಲೆ ಜೀವನದಿಯಾಗಿ, ಮರಳಿ ನಿನ್ನೀ ಊರಿಗೆ

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಎದಿ ಮ್ಯಾಗಿನ ಬಾಂದಳದ ಚಂದ್ರಾಲ
ಕೂಲಿ ಎಲ್ಲಾ ನೌಕರಿ ಇಲ್ದಿ ಗುಳೇ ಹೊರಟು ನಿಂತ್ಯಾಂವಾ
ನೇಗಿಲೆಲ್ಲಾ ಚಾಕರಿ ಇಲ್ದಿ ಒಕ್ಕಲು ಮೂಲಿ ಹಿಡಿದ್ಯಾಂವಾ
ಪೂಜಾರಪ್ಪ ಬೆಟ್ಟದ್ ಗುಡೀಲ್ ದ್ಯಾವರ್ ಮುಂದಿ ಕುಂತಾಂವ
ಮಂದೀನ್ ಸೇರ್ಸಿ ಪಟೇಲಪ್ಪ ಪಂಚಾಯಿತಿ ಕರೆದ್ಯಾಂವಾ
ಶಂಖ ಊದ್ಸಿ ಶಾನ್ಬೋಗಪ್ಪ ಶ್ಯಾನೆ ಶಾಸ್ತ್ರ ನೋಡ್ತಾಂವ

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಬಾಳು ನೀ ಬೆಳದಿಂಗಳ
ಬೊಂಬಾಯ್ ಕಾರ್ಖನಿ ಮುಚ್ಲೇಬೇಕಂತ
ಸೆಟ್ಟರ ಮಗ ಸೆಟಗೊಂಡಾಂವ
ರಾಸಿ ಅರಿವಿ ಲಗೂನೆ ಒಗಿಬ್ಯಾಕಂತ
ಅಗಸನ ಹೆಂಗ್ಸು ಪಟ್ ಹಿಡಿದ್ಯಾಳ
ಹಳ್ಳಿ ಹೈಕ್ಳು ಬಿಡಲೊಲ್ಲಿ ನಿನ್ನ ಬ್ಯಾರೆ ಊರಿಗೆ
ನಂಬು ನಮ್ಮನ್ ಎಂದ್ ನಿನ್ ಕರೆದ್ಯಾಂವಾ
ಗೌಡನ್ ಹೈದ ಕದಲೊಲ್ಲಿ ಪ್ರಾಣ ಬಿಟ್ರೂ ಖರೆ
ನೆಚ್ಚು ನನ್ನ ಎಂದ್ ನಿನ್ ಕೂಗ್ಯಾಂವಾ
ನೀ ಹಿಂಗ್ಯಾಕ ಮಾಡಿ ಹೋದಿ ಎಂದಾಂವಾ
ಮಾರಿ ತಿರುಗ್ಸಿ ಹಂಗ್ಯಾಕೆ ನೀ ಮುನಿಸಿಕೊಂಡ್ಯಾಂವಾ?

ನೀ ಸುಪ್ತದೀಪ್ತಿ ಯಾಕ ಆದೀ ಶಾಲ್ಮಲಾ?
ನನ್ನಯ ಭಾಗ್ಯದ ಹಂಸಾಲ,
ನನ್ನೆದೆಯ ಫಸಲಿಂದು ಕೊಳೆಯಾಂವ
ಕಸದ ಬದಲಿ ರಸವ ತೆಗೆದು ಹೊಚ್ಚ ಹೊಸ ಪೈರ ಬೆಳೆಯಾಂವ
ನಿನ್ ದಂಡಿ ಮ್ಯಾಲೆ ಕೂತು ಗಾಳಿಪಟ ಹಾರಾಸಾಂವಾ
ಪಟ ಹರಿದು ನೆಲ ಕಚ್ಚರೂ ಅಲ್ಲೇ ಕುಂತು ಬಿಡಾಂವಾ
ಬಾರೇ ನೀ ಶಾಲ್ಮಲೆ ಹುಬ್ಬಳ್ಳಿ-ಧಾರವಾಡ ಕೇರಿಗೆ,
ಮರಳಿ ನಿನ್ನೀ ಊರಿಗೆ...ನನ್ನೀ ಗೂಡಿಗೆ
ಗುಪ್ತಗಾಮಿನಿ ಓ ಶಾಲ್ಮಲಾ,
ನನ್ ಉಸಿರು ನೀ ನೂರ್ಕಾಲ...

ಸ್ಫೂರ್ತಿ: ನನ್ನ ಈ ಕವನಕ್ಕೆ ಸ್ಫೂರ್ತಿ ಮಾಲತಿ ಪಟ್ಟಣಶೆಟ್ಟಿಯವರು ಬರೆದಿರುವ ಶಾಲ್ಮಲಾ ನದಿ ಬಗೆಗಿನ ಪದ್ಯ

1 comments:

Anonymous said...

ಅಡ್ಡಿಯಿಲ್ರೀ ಕಿರಣ್, ಅಗದೀ ಮಸ್ತ ಬರದೀರಲ್ಲ..

ಹೀಂಗ ಬರಕೋತಿರ್ರಿಪಾ...

...ಅಶೋಕ