Monday, May 24, 2010

ನಮ್ಮೊಳಗೊಬ್ಬ ನಾಜೂಕಯ್ಯ

ಕಳೆದವು ಮಂಗಳವಾರಗಳು
ಮರಳಿದವು ಗುರುವಾರಗಳು
ಅಬ್ಬಬ್ಬಾ ಮುಂಜಾನೆ ೮:೩೦ ಗೆ ಕರೀತೀರಲ್ರೀ ಶನಿವಾರ ಕೂಡ
ಭಾನುವಾರ ಕೂಡ ರಜೆ ಇಲ್ವಾ ಮ್ಯಾಡಂ?
ಸನ್ನಿವೇಲ್ ದೇಗುಲದ ಪ್ರೀತಿ ಭೋಜ್
ತಪ್ಪಿದರೆ ಅರ್ಚನ-ವತ್ಸ-ಶರ್ಮಿಳ ಮನೆಯವರ ಊಟ ಹರ್ ರೋಜ್
ಹೀಗೆ ಸಾಗಿತ್ತು ನಮ್ ರಿಹರ್ಸಲ್ಲು
"ಭಾವುಕ ಮಿಲನ"ದ ಮೊದಲ ಮೈಲಿಗಲ್ಲು
ಈ ನೆನಪಿನ ದೋಣಿಯಲ್ಲಿ ಸಿಕ್ಕರು ಹಲವರು
ಹೆಚ್ಚು ಹತ್ತಿರವಾದರು ಕೆಲವರು

ಮೊನಚಿನ ಮಾತಿನ ಶರ್ಮಿಳ ಮ್ಯಾಡಂ
ಒಮ್ಮೆ ಅಭ್ಯಾಸಕೆ ಹಾಜರಿ ತಪ್ಪಿದರೆ ಅವ್ರು ಬಹಳ ಗರಂ
ಕೂರಿಸಿ ಓದಿಸಿ ಶುರುವಾದ ಅಭ್ಯಾಸ ಸೆಷನ್ನು
ತಪ್ಪು ಒಪ್ಪುಗಳಿಗಿಲ್ಲ ಅಲ್ಲಿ ಮಾರ್ಜಿನ್ನು
ಅರಿವಿಲ್ಲದಂತೆಯೇ ತರಿಸಿತ್ತು ಹಾವ ಭಾವಗಳನ್ನು
ಕಲಿಸಿತ್ತು ನಟನೆಯ ಸೂಕ್ಷಾತಿಸೂಕ್ಷ್ಮಗಳನ್ನು

ಬಂದಿತ್ತಾಗಲೇ ತಾರೀಖು ಮೇ ಇಪ್ಪತ್ಮೂರು
ಹವ್ಯಾಸಿ ರಂಗಭೂಮಿ ಆಸಕ್ತರ "ನಾಟಕ ಚೈತ್ರ"ದ ಬ್ಯಾನ್ನರ್ರು

ಸೃಜನಶೀಲ ಸೌಜನ್ಯರ ಕಲೆ ಕೌಶಲ್ಯದ ಮ್ಯಾಜಿಕ್ಕು
ಸಂಗೀತ ಸರಸ್ವತಿ ಗಾರ್ಗಿ ಪಂಚಾಂಗಂ ಆಲಾಪವದು ಕರಾರುವಾಕ್ಕು
ಕೀಲಿಮಣೆಯ ಮೇಲೆ ಅಭಿಜಿತ್ ರ ಕೈಚಳಕ
ಬೆಳಕಿಗೆ ವಿನಯ್ ಹೆಗ್ಡೆ, ಮೈಕಿನ ಹಿಂದೆ "ಹೆಡ್ ಮೇಡಂ" ಮೋನಿಕ
ಮೇಕಪ್ ಮಾಡಿ ಮೊಗಕೆ ಮೆರುಗು ನೀಡಿದರು ವಿಜಯ
ಸಹಾಯ ಹಸ್ತ ಚಾಚಿದ ಶರಣ್, ವಿದ್ಯಾಧರ, ಕಿರಣ್ ಮಯ್ಯ, ಗಿರೀಶ್, ಗುಬ್ಬಿ, ಅಜಯ್ ಮತ್ತು ತಂಡ
ಟಿಕೇಟುಗಳ ಲೆಕ್ಕ ಇಟ್ಟು ಜೊತೆ ನೀಡಿದರು ಪ್ರಶಾಂತ್ ಪಡುಬಿದ್ರಿ
ಸುತ್ತೋಲೆಗಳ ಕಳಿಸಿ ಸಾಥ್ ನೀಡಿದವರು ಕನ್ನಡ ಕೂಟದ ಬಳಗ

ಅರಳಿದಳು ರಂಗಮಂಚೆ "ನಾಟಕ ಚೈತ್ರ"ಳಾಗಿ
ತೆರೆದಳು ಮತ್ತೊಂದು ಪ್ರಪಂಚವ ಸಭಿಕರ ನಿಬ್ಬೆರಗಾಗುವಂತೆ ಮಾಡಿ

ಒಬ್ಬರನೊಬ್ಬರ ಮೀರಿಸುವಂತೆ ನಟಿಸಿದ ಪಾತ್ರಧಾರಿಗಳು
"ನಮ್ಮೊಳಗೊಬ್ಬ ನಾಜೂಕಯ್ಯ"ನಿಗೆ ಜೀವ ತುಂಬಿದರು

"ಸಾರಿಗೆ ಸಚಿವ ಖದಂಗೆ ಸ್ವಲ್ಪ ರಸಿಕತೆ ಹೆಚ್ಚಿಗೆ, ಅದಕ್ ನಾ ಎನ್ ಮಾಡ್ಲಿ"
"ಬರೋಬ್ಬರಿ ಹೇಳಿದ್ರಿ ಸರಾ?"
ಉತ್ತರ ಕರ್ನಾಟಕ ಭಾಷೆಯಲ್ಲಿ ಮೊನಚಿನ ಮಾತುಗಳೊಂದಿಗೆ
ಮನ ಸೂರೆಗೊಂಡರು ನಾರಾಯಣ ಸ್ವಾಮಿಗಳು
"ಪಾಲಿಟಿಕ್ಸ್ ನಲ್ಲಿ ಇಷ್ಟು ವರ್ಷದಿಂದ ಇದೀನಲ್ಲಮ್ಮ"
ಖಾದಿ ವಸ್ತ್ರ ಗಾಂಧಿ ಟೊಪ್ಪಿಗೆ ತೊಟ್ಟು ಮಿರಿ ಮಿರಿ ಮಿಂಚಿ ನೆನಪಲಿ ಉಳಿವರು
ಹಗಲುವೇಷ ತೊಟ್ಟ ಭ್ರಷ್ಟ ಮಂತ್ರಿ ಮಿನಿಸ್ಟರ್ ಪಾಟೀಲರು

"ಹೂಮ್ ಸಾ, ನನ್ ಹೆಂಡ್ತಿ ಗಂಡ ನಾನೇ ಸಾ"
ಬದುಕಿನ ಕಟ್ಟಲೆಗಳನ್ನೇ ಅರಿಯದ ಮುಗ್ಧ ಫೋಟೋಗ್ರಾಫರ್
"ಸರ್, ನನ್ ಬ್ಯಾಂಕ್ ಅಲ್ಲಿ 200 ರುಪಾಯಿ ಇದೆ ಕೊಡ್ತೀನಿ, ನಿಮ್ ಸಾಲ ತೀರ್ಸಿಬಿಡಿ ಸರ್"
ಮುಗ್ಧ ನಿಷ್ಕಪಟ ಸಮಾಜ ಬಿಂಬಿಸುವ "ದುರ್ಬಲ ಕೊಂಡಿ" ಈ ಮಹಾದೇವ ಜಾಗಿರ್ದಾರ್
"ಗೋ ಗೋ ಗೋ, ನನ್ ನಾಯಿಗೆ ಸ್ನಾನ ಮಾಡಿಸಬೇಕು"
ಇಟಾಲಿಯನ್ ನಾಯಿ ಮೇಲಿನ ಹುಚ್ಚು ಪ್ರೀತಿಯ ಮುಖ ಒಂದೆಡೆ
"ಕೇಸ್ ಬುಕ್ ಮಾಡ್ಸಿ ಒಳಗೆ ಹಾಕ್ಸಿಬಿಡ್ತೀನಿ, ಹುಷಾರ್"
ಗುಡುಗಿ ಸದ್ದಡಗಿಸಿದ ಲಂಚಕೋರ ಡೈರೆಕ್ಟರ್ ದ್ವಿಮುಖ ಇನ್ನೊಂದೆಡೆ

"ನಮ್ ಫಾದರ್ ಗ್ರಾಂಡ್ ಫಾದರ್ ಇಬ್ರೂ ಹೋಗ್ಬಿಟ್ರಲ್ಲಾ?"
"ಯಲ್ಲಿ"
"ಲಂಡನ್"ನಲ್ಲಿ
ನಕ್ಕು ನಗಿಸಿದರು ರೀಟಾ ಚಬಲಾನಿ
"ಯಂಗ್ ಮ್ಯಾನ್, ಮೈ ನೇಮ್ ಇಸ್ ಕೆ.ಆರ್.ಚಬಲಾನಿ"
ಹೌಹಾರುವಂತೆ ಮಾಡಿದರು ಕಿಶೋರ್ ಆರ್ ಚಬಲಾನಿ

"ಡ್ಯಾಡಿ ನೀವು ಬೇರೇನೆ ಮೀಟಿಂಗ್ ಶುರು ಮಾಡ್ಬಿಟ್ರಲ್ಲಾ, ಹೀಗಾದ್ರೆ ನಂಗೆ ಬರ್ತ್-ಡೇನೆ ಬೇಡ"
ಉಲಿದಳು ನುಲಿದಳು ಮಿನಿಸ್ಟರ್ ಮಗಳು ನೀತಿ
ಸ್ವಾಮಿ ನಿಷ್ಠ ಪ್ರಭಾಕರನೊಬ್ಬ
"ಹೇಯ್ ನಕ್ಸಲೈಟ್, ನಿನ್ನ ರೆಡ್ ಲೈಟ್ ಮಾಡ್ಬಿಡ್ತೀನಿ"
ಬೆದರಿಸುವ ಪುಂಡ-ಪುಡಾರಿ ಗುರುದಾಸಪ್ಪ
"ಮೂರು ಪರ್ಸೆಂಟ್ ಹೆಚ್ಚಿಗೆ ಕೊಡಿ..ಪ್ರಭಾಕರ ಫಿನಿಶ್"
ಕಪಟಿ ಬೆಂಕಿ ಪಟ್ಟಣದ ಅಗ್ನಿಹೋತ್ರಿ

ನಿಷ್ಠೆಯಿಂದ ಯಶಸ್ಸು ಗಳಿಸಬೇಕೆಂಬ ನಾಯಕ ಶಿವಪ್ರಸಾದನ ಛಲವಾದಿ ಪಯಣ
ಪರಿಸ್ಥಿತಿಯ ಕೈಗೊಂಬೆಯಾಗಿ ನರಳುವ ನಾಯಕಿ ಮಾಲತಿಯ ಮೌನರೋದನ
ಭ್ರಷ್ಟ ವ್ಯವಸ್ಥೆಯ ಚಕ್ರವ್ಯೂಹದಲ್ಲಿ ಸಿಲುಕಿ ತನ್ನ ತತ್ವ-ಆದರ್ಶಗಳನ್ನು ಗಾಳಿಗೆ ತೂರುವ ನಾಯಕನ ನರಳುವ ಮನ
ಹಾದರಕ್ಕೆ ಇಳಿಯುವಂತ ಸ್ಥಿತಿ ತಂದೊಡ್ಡಿದ ವಿಧಿಯಾಟದಲ್ಲಿ ಕುದಿದು ಸೊರಗುವ ನಾಯಕಿಯ ಹೃದಯ
ತೆರೆಯ ಮೇಲೆ ಕೊನೆಯ ಪರದೆ ಬೀಳುತ್ತಾ ಹೋದಂತೆ, ಆ ಕೊನೆಯ ದೀಪವು ಆರುತ್ತ ಹೋದಂತೆ
ಪ್ರೇಕ್ಷಕ ತನ್ನೊಳಗೊಬ್ಬ ನಾಜೂಕಯ್ಯನಿದ್ದಾನೆಯೇ ಎಂದು ಶೋಧಿಸಲಣಿಯಾದನಂತೆ
ಮನ ಮುಟ್ಟಿದ ಕಥನ...ಕಿವಿಗಡಚಿಕ್ಕುವ ಕರತಾಡನ...

5 comments:

ಹಂಸಾನಂದಿ said...

ಕಿರಣ್ ಅವರೆ,
”ನಾಟಕ ಚೈತ್ರ’ ಅಂತ ಗೂಗಲೇಶ್ವರನ ಮೊರೆ ಹೊಕ್ಕಾಗ ನಿಮ್ಮ ಈ ಬ್ಲಾಗ್ ಸಿಕ್ಕಿತು :) ನೋಡಿ ಖುಶಿ ಆಯ್ತು!

ನಿಮ್ಮವ

- ’ಡೈರೆಕ್ಟರ್’ :)

ಕಿರಣ್ ಜಯಂತ್ said...

ರಾಮ್ ಪ್ರಸಾದ್ ರವರೆ,
ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಹಂಸಾನಂದಿ ಕೂಡ ಅದ್ಭುತವಾಗಿದೆ.

ನಮ್ಮ ನಾಟಕದ ವೀಡಿಯೊ ಲಿಂಕ್ ಎಂದು ಸಿಗುವುದೋ ಎಂದು ಕಾಯುತ್ತ ಇದ್ದೇನೆ. ನಿಮಗೆ ಸಿಕ್ಕಲ್ಲಿ ಲಿಂಕ್ ಕಳಿಸಿ.

-ಕಿರಣ್

Rasikara Rajya said...

ಒರಟು ಮಾತಿನ ಕಾರ್ಪೊರೇಟರ್ ಬೇಕಾ?
ಅದಕ್ ನಾನಿದೀನಲ್ಲ.
ನವಿರು ಭಾಷೆಯಲಿ ಅಂತರ‍ಾಳವ
ಅಭಿವ್ಯಕ್ತಿಸುವ ಕವಿ ಬೇಕಾ?
ಅದಕ್ಕೂ ನಾನಿದೀನಲ್ಲ !
ಚುರುಕು ಹಾಸ್ಯದ ಹುಚ್ಚು ಜಾಹಿರಾತುಗಳು ರವಷ್ಟು ಬೇಕಲ್ಲ.
ಅದಕ್ಕೂ ನಾನೇ ಇದೀನಲ್ಲ ! !
ಕಾಣದ ಮೂಲೆ ಮೂಲೆಗಳಿಗೂ ನುಗ್ಗಿ ಬೆಳಕು ಚೆಲ್ಲುವ ಕಿರಣ ಬೇಕಲ್ಲ?
ಸರಿ ಬಿಡಿ. ಗೊತಾಯ್ತು.

ಕಿರಣ್, ನಿಮ್ಮ ಕವನ, ನಟನೆ, ಬರವಣಿಗೆ ಬಹಳ ಮೆಚ್ಚುವಂತಿದೆ. ಅಭಿನಂದನೆಗಳು.

ಮಧು

ಕಿರಣ್ ಜಯಂತ್ said...

ಮಧು ಅವರೆ,

ನಿಮ್ಮ ಪ್ರಶಂಸೆ ತುಸು ಜಾಸ್ತಿ ಆಯಿತು ಅನ್ಸತ್ತೆ. ತುಂಬಾ ಖುಷಿ ಆಯಿತು ನಿಮ್ಮ ಚುಟುಕು ಕವನವನ್ನು ಓದಿ. ಹೀಗೆ ಅನ್ನಿಸಿದನ್ನು ಹಾಗೆ ೪ ಸಾಲಿನ ಪದ್ಯ ಮಾಡಿ ಬರೆಯುವ ನಿಮ್ಮ ಪ್ರತಿಭೆಗೆ ಹಾಟ್ಸ್-ಆಫ್.
ಎಲ್ಲರನ್ನು ಗಣನೆಗೆ ತೆಗೆದುಕೊಂಡು, ವಯಸ್ಸು-ಅಂತಸ್ತು ಭೇದವಿಲ್ಲದೆ ಹುಮ್ಮಸ್ಸಿನೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಾ, ಎಲ್ಲರನ್ನು ಹುರಿದುಂಬಿಸುವ ನಿಮ್ಮ ಗುಣ ಪ್ರಶಂಸನಾರ್ಹ. ಚುರ್ ಮುರಿಗೆ ಭೇಟಿ ಕೊಡುತ್ತಿರಿ.

- ಕಿರಣ್ ಜಯಂತ್

Anonymous said...

ಪ್ರೀತಿಯ ಕಿರಣ್,

ನೀವು ಇದನ್ನು ನಮ್‍ಕೂಡ ನಾಟಕಾ ಮುಗದ ಯಾಡ್ ದಿನದಾಗ ಹಂಚಿಕೊಂಡಿದ್ರಿ ಖರೆ...ಆದರ ಅದು ಎಷ್ಟು ಚೆಂದ ಮೂಡಿಬಂದದ ಅಂತ ನಾನು ನಿಮಗ ಹೇಳಿರಲಿಕ್ಕಿಲ್ಲ ಅಂತ ಅನಸ್ತದ. ನಾಟಕದ ತಯಾರಿಯಿಂದ ಹಿಡಕೊಂಡು ನೋಡಿದವರ ಮೆಚ್ಚಗೀ ಚಪ್ಪಾಳಿಮಟ ಎಲ್ಲಾನೂ ಸಾರಾಂಶ ಭಾಳ ಛೊಲೋ ಸೆರೀ ಹಿಡದೀರಲ್ಲ...ಶಭಾಷ್...

...ಅಶೋಕ ಹಂದಿಗೋಳ