Sunday, September 15, 2013

ಬಾಸ್ಟನ್ ಕೆಮ್ಮು


ರಜೆಯ ಮಜವನ್ನು ಸವಿಯಲು ಹೆಂಡತಿ ಸಮೇತ ಬಾಸ್ಟನ್ ಗೆ ಹೊರಟ ನನ್ನ ವ್ಯಥೆಯ ಕಥೆ ಹೇಳಲೇನು? flightu-ಹೋಟೆಲ್ಲು-ರೆಂಟಲ್ ಕಾರ್ ಈ ಎಲ್ಲದರ ಒಟ್ಟು ಖರ್ಚಿಗಿಂತ ಹೆಚ್ಚು ವ್ಯಯ ಮಾಡಿದ್ದು ಯಾವುದಕ್ಕೆ ಎಂದು ಬಲ್ಲಿರೇನು? Robitussin ಕೆಮ್ಮಿನ ಔಷದ ಇರುಳೆಲ್ಲ ಕಣ್ಣಿಗೆ ಅರಳೆಣ್ಣೆ ಬಿಟ್ಕೊಂಡು ನನ್ನ ಮಡದಿಯ ಮೂಗು ಹಿಡಿದು syrup ಹೊಯಿದಿದ್ದೆ ಹೊಯಿದಿದ್ದು ಅವಳಂತೂ ಅದನ್ನು ನಿಂಬೆ ಷರಬತ್ತಿನಂತೆ ಕುಡಿದಿದ್ದೆ ಕುಡಿದದ್ದು ಇದಕ್ಕೂ ಕಮ್ಮಿಯಾಗದ ಇಂತಿಪ್ಪ ನನ್ನಾಕೆಯ ಕೆಮ್ಮಿಗೆ ಚಿಕಿತ್ಸೆ ಕೊಡಿಸಲೆಂದು ಕರೆದೊಯಿದದ್ದು ಡಾಕ್ಟರ ಅರವಿಂದರ ಬಳಿ ಆಕೆಯ ಕೆಮ್ಮಿನ ರಭಸಕ್ಕೆ ಬೆಚ್ಚಿ ಬಿದ್ದ ಡಾಕ್ಟರ ಅರವಿಂದರ ನಿರ್ಣಯ ಮಾಡಿದ್ದು ಹೀಗೆ - "ನೀವು ಯಾವುದಕ್ಕೂ ಸ್ವಲ್ಪ ಧೈರ್ಯ ತಗೋಬೇಕು, ಇದು ಅಂತಿತ್ತ ಕೆಮ್ಮಲ್ಲ.. ನಾಯಿ ಕೆಮ್ಮು ಇರ್ಬೇಕು ನಂಗೆ ಪರಿಚಯದವರು ಕರಿಯಪ್ಪ ಗೌಡ್ರು ಅಂತ ಇದಾರೆ ನೋಡೋಕೆ ಥೇಟ್ ಆ ಬದ್ಮಾಶ್ ಆಕಾಶ್ ತರಾನೇ ಇದಾರೆ. ಆದರೆ ಬಹಳ ಒಳ್ಳೆ veterinary ಡಾಕ್ಟರ್ ನೀವು ಯಾವುದಕ್ಕೂ ಒಂದ್ಸಲ ಅಲ್ಲಿ ಹೋಗೋದು ಉತ್ತಮ" ನನ್ನಾಕೆ ಕಿರುಚಿದ್ದು ಹೀಗೆ - "No I cannot believe it. ನನ್ನ ಗಂಟಲು ಸರ್ವನಾಶ ಆಯಿತು" ಡಾಕ್ಟರ ಅರವಿಂದ್ ಸಮಾಧಾನಿಸಿದ್ದು ಹೀಗೆ - Yes yes yes, you better believe it" ಬಾಸ್ಟನ್ ನಾವಿಕದಲ್ಲಿ ಜನ ಅಂತೂ ನಮ್ ನಾಟಕ ನೋಡಿದ್ರೋ ಬಿಟ್ರೋ ಗೊತ್ತಿಲ್ಲ. ಆದರೆ ಬಂದ್-ಬಂದವರೆಲ್ಲ ಒಂದನ್ನಂತೂ ಖಂಡಿತ ನೋಡಿದ್ರು ಏನು ಅಂದ್ರಾ? ಅದೇ ಶಶಿಕಲ ಅವರು ಮುಡಿದ್ದಿದ್ದ ಕಿವಿಯ ಮೇಲಿನ ಹೂವು ಊಟದ ಸಾಲಿನಲ್ಲಿ ನಿಂತ ಮಂದಿ ಹೇಳಿದ್ದು ಹೀಗೆ - "ನೀವು ಆ ನಾಟಕದಲ್ಲಿ ನಟಿಸಿದ ಶಶಿಕಲ ಅಲ್ವ? ನಿಮ್ಮ ಕಿವಿಯ ಮೇಲಿನ ಹೂ ತುಂಬಾ ಎದ್ದು ಕಾಣಿಸ್ತಾ ಇತ್ತು, ಚೆನ್ನಾಗಿತ್ತು ನಾವಂತೂ ನೀವು ಹೇಳ್ತಿದ್ದ ಡೈಲಾಗ್ ಕೇಳೋದು ಬಿಟ್ಟು ಅದನ್ನೇ ನೋಡ್ತಾ ಕೂತುಬಿಟ್ವಿ" ಊಟದ ಮೇಜಿಗೆ ಬಂದ ಮಂದಿ ಕೇಳಿದ್ದು ಹೀಗೆ - "ನೀವು ಆ ಕಾಮಿಡಿ ನಾಟಕದಲ್ಲಿ ಪಾತ್ರ ಮಾಡಿದ್ರಿ ಅಲ್ವೇ? ನಿಮ್ಮ ಕಿವಿಯ ಮೇಲಿನ ಹೂ ತುಂಬಾ ಎದ್ದು ಕಾಣಿಸ್ತಾ ಇತ್ತು, ಚೆನ್ನಾಗಿತ್ತು India ದಿಂದ ತರಿಸಿದ್ದ? ಎಲ್ಲಿ ಅಂಗಡಿ? ಮಲ್ಲೇಶ್ವರಂ ಅಥವಾ ಜಯನಗರನಾ?" ಹೊರಗಿದ್ದ ಅಂಗಡಿ ಮಳಿಗೆ ಬಳಿ ಇದ್ದ ಜನ ಕೇಳಿದ್ದು ಹೀಗೆ - "ನೀವು ಆ ಕಾಮಿಡಿ ನಾಟಕದ ಡೈರೆಕ್ಟರ್ ಅಂತೆ? ಅದೇನೋ ಬೆಟ್ಟದ ಹೂ ತಂದಿದ್ದೀರಂತೆ, ಪುಟ್ಟಗೌರಿಗೂ ಒಂದು ಹೂ ಕೊಟ್ಟಿದ್ದೀರಂತೆ. ಎಷ್ಟು ಬೆಲೆ? ಎಕ್ಸ್ಟ್ರಾ ಇದ್ಯಾ? wholesale ಅಲ್ಲಿ ತಗೊಂಡ್ರೆ ಡಿಸ್ಕೌಂಟ್ ಉಂಟಾ?" ಅಷ್ಟೇ ಏಕೆ ಕೊನೆಗೆ ಶಮಿತಾ ಮಲ್ನಾಡ್ ಕೂಡ ಕೇಳಿದ್ದು ಅದನ್ನೇ - "ಒಹ್ ನೀವೇನಾ ಶಶಿಕಲ? ಅಲ್ಲಿ ಬ್ಯಾಕ್ ಸ್ಟೇಜ್ ಹತ್ತಿರ ನಂಗೆ ಎಲ್ರೂ ಫ್ಯಾಷನ್ advise ಕೊಡ್ತಿದ್ರು. ಮೇಡಂ ನಿಮ್ ಎಳೆ-ಕರು ಚರ್ಮದ leather ಜಾಕೆಟ್ ಗೆ, ತೆಂಗಿನ ನಾರಿನಂತ ಕೇಶರಾಶಿ combination ಗೆ ಶಶಿಕಲಾ ಅವರ ಹೂ ಮಾತ್ರ ಒಳ್ಳೆ selection" "ಕುರುಡನ ಮಾಡೋ, ತಂದೆ ಗಂಡನ ಕುರುಡನ ಮಾಡೋ ಇಂದೇ" ಎಂದು ಹಾಡುತ್ತಾ ಬೇಸತ್ತು ಕೊನೆಗೆ ಅರುಂಧತಿ ಬಳಗ ಬಾಸ್ಟನ್ ಬಂದು ತಲುಪಿತ್ತು ನಾವಿಕ ನಿರೂಪಕಿಯ ನಿರೂಪಣೆ ಹೀಗೆ ಮುಂದುವರೆದಿತ್ತು "ಇವತ್ತು ನಂದು ಕೂಡ ಬರ್ತ್ಡೇ, ಆದರೆ ನಾನು ಅರುಂಧತಿ ಅವರಷ್ಟು ಫೇಮಸ್ ಅಲ್ವಲ್ಲ ಸೊ ನಂಗೆ ಹೂವಿನ ಗುಚ್ಛ ಯಾರು ಕೊಡ್ಲಿಲ್ಲ" ಆಕೆಯ ಮುಗ್ಧತೆಗೋ ಅಥವಾ ಅಜ್ಞಾನಕ್ಕೋ ಅಂತು ಗೊಳ್ಳೆಂದು ನಕ್ಕಿತು ತುಂಬಿದ್ದ ಸಭಾಂಗಣ ಪ್ರವೀಣ್ ಗೋಡ್ಖಿಂಡಿ ಯಾ ಕೊಳಲು ನಾದದ ಗುನುಗಿಗೆ ಊಹಿಸಬೇಕಿತ್ತು ಚಿತ್ರಗೀತೆ ಹಿಂದಿನ ಸಾಲಿನಲ್ಲಿ ಕೂತಿದ್ದ ಮಹಿಳೆಯೊಬ್ಬರು ಕಂತೆಗೆ ತಕ್ಕ ಬೊಂತೆ ಖಿನ್ನರಾಗಿದ್ದ ಅರುಂಧತಿ ಒಳ್ಳೆ ಕೀಟಲೆ ಮೂಡಿಗೆ ಬಂದರಂತೆ "ಈ ಹಾಡು ಗೊತ್ತಾಯಿತು ತಾನೆ? ಹೂ! ಬರ್ಕೊಳಿ ಬರ್ಕೊಳಿ" ಆದರೆ ಆ ಮಹಿಳೆ ಮಾತ್ರ ಹೇಳಿದ್ದು "ನನಗ್ಯಾಕೋ ಡೌಟು" ಅಂತೆ "ಏನಮ್ಮಾ! ಬಾಸ್ಟನ್ ನಲ್ಲಿ ನಾಟಕ ಅಂತಿದ್ಯಲ್ಲ.. ಪಾರ್ಟಿ ಜೋರಾ? ಲೋ ಆಕಾಶ್, ನಾನು ಅಲ್ಲಿಗೆ ಹೋಗ್ ಬಾರದಿತ್ತು ಕಣೋ. ಬರಲ್ಲ ಅಂತಾನೆ ಹೇಳ್ದೆ ಈ ನಮ್ ಡೈರೆಕ್ಟರ್ ಶರ್ಮಿಳ ಅವರು ಒತ್ತಾಯ ಮಾಡಿ ಕರೆದಿದ್ದಕ್ಕೆ ಹೋದೆ. ಅಲ್ಲಿ ಬರೀ ಮೂಗಿನ ತುದಿಗೆ ಕೋಪ ಇರೋ ಶಶಿ ಅಂತ ಹುಡಿಗಿಯರು, ಹೊರಗೆ ಥಳುಕು-ಒಳಗೆ ಉಳುಕು ತರಹದ ಅರುಂಧತಿ ಅಂತವರು ಬಿಟ್ರೆ ಬರೀ ಸಿಡುಕುವ ಹೆಂಗಸರು. "ಸಿಟ್ಟು" ಅಂದ ಕೂಡಲೇ ಒಂದು ಹನಿಗವನ ನೆನಪಾಗುತ್ತೆ. ನಮ್ಮ ಮುಂದಿನ ಸಾಲಿನಲ್ಲಿ ಕೆನ್ನೀಲಿ ಸೀರೆಯುಟ್ಟ ಆಂಟಿ ಆಹಾ! ಅವರಿಗೋ ಬರೋ ಸಿಟ್ಟೋ ಮುಖದ ತುಂಬಾ ಪುರಸೊತ್ತಿಲ್ಲ ಪಾಪ ತಿವಿಯಲು ತನ್ನ ಗಂಡನನ್ನ ಅದಕ್ ತಿವಿದು ತಿವಿದು ಬಯ್ತಾರೆ ಕಂಡ-ಕಂಡವರನ್ನ!! ಡೈಮಂಡ್, ರೂಬಿ, ಎಮರಾಲ್ಡ್ ಹೀಗೆ ವಿಜಯರವರು ಟ್ರೈ ಮಾಡಿದ್ದು ಹತ್ತು ಹಲವು ಹರಳು ಹಾರದ ೧೪೦ kg ತೂಕಕ್ಕೆ ಬಾಗಿತ್ತು ಅವರ ಕೊರಳು ಇದರ ಬೆಲೆ ಕಂಡ ವಿಜಯಾಪತಿಗೆ ಆಗಿತ್ತು ಅರಳು-ಮರಳು ಹಾರವೆತ್ತ ವಿಜಯರಿಗೆ ಲಿಫ್ಟು ಕೊಡಲು ನಿರಾಕರಿಸಿತ್ತು ಎಲಿವೇಟರು ಈ ರತ್ನಾಭರಣದ ಬೆಲೆಯಾಗಿತ್ತು ೩೯ ಸಾವಿರ ಡಾಲರು ಎನೂ? ಮೂವತ್ತು...ಉಹೂ..ಉಹೂ ಉಹೂ ಅದೋ ಬೆಲೆ ಕೇಳಿ ಕೆಮ್ಮಲು ಶುರು ಮಾಡಿದ್ರು ವಿಜಯಾಪತಿ ಹೋಮಿಯೋಪತಿ, ನ್ಯಾಚುರೋಪತಿ, ಅಲೋಪತಿ ಹೀಗೆ ಯಾವುದಕ್ಕೂ ಕಮ್ಮಿಯಾಗದ ಅವರ ಕೆಮ್ಮಿಗೆ ಇದೋ ನಮ್ಮ ಸಿಂಪತಿ !!

Monday, January 31, 2011

ನಿಶ್ಚಿತಾರ್ಥ


ಬದುಕಿನ ಎಲ್ಲಾ ಋತುಗಳನ್ನು ಹಂಚಿಕೊಳ್ಳುವ
ನನ್ನ ಪ್ರೀತಿಯ ಹುಡುಗಿಯನ್ವೇಷಣೆಯಲ್ಲಿ
ಅಷ್ಟ ದಿಕ್ಕಿಗೆ ನಿಷ್ಠೆ ಇಟ್ಟು
ಊರು-ಕೇರಿ ಸುತ್ತಿ ಅಮೇರಿಕೆಯಲ್ಲೆಲ್ಲಾ ಅರಸಿ ಬಂದರೂ
ಕಣ್ ಬಿಡಲಿಲ್ಲ ಆ ಸರ್ವಶಕ್ತನು!

ವ್ಯರ್ಥ ಪ್ರಯತ್ನದ ದೀರ್ಘಾಯುಸ್ಸನು ಶಪಿಸುತ್ತಾ
ಬಾಳಸಂಗಾತಿಯವಳು ಮರೀಚಿಕೆಯೇ?
ಹೀಗೆಂದು ಸ್ವಗತಕೆ ಪ್ರಶ್ನೆ ಮಾಡಲು
ಪಕ್ಕದೂರಿನಲ್ಲೇ ಇತ್ತು ಋಣಾನುಸಂಬಂಧ
ದೇವರಾಯನದುರ್ಗದ ತಪ್ಪಲಿನಲಿ ನಾಮದಚಿಲುಮೆಯ ತೀರದಲಿ
ಸೃಷ್ಟಿಕರ್ತನವನು ಕೊನೆಗೂ "ದೀಕ್ಷೆ" ಇತ್ತನು!!!

ಆ ಬಟ್ಟಲು ಕಂಗಳ ಸುಂದರಿಯ ಕಿರು ಹುಬ್ಬಿಗೆ ಮನಸೋತು
ನೀಳ ಕೇಶರಾಶಿಯ ಕಡುಕಪ್ಪು ಬಣ್ಣಕೆ ಶಿರಬಾಗಿ
ನಿರಾಭರಣ ಚೆಲುವೆಯ ಸಹಜತೆ-ಸರಳತೆಗೆ
ಮೈಮರೆತ ಆ ದಿನ
ಬೆವೆತು ಒದ್ದೆಯಾದ ನನ್ನ ಅಂಗೈಗೆ ಪಸೆ ಆರಿ ಒಣಗಿದ ನಾಲಿಗೆಯ ಸಂಗ
ನೆಲ ನೋಡಲಣಿಯಾದ ನಯನಗಳಿಗೆ ಡವಡವಗುಟ್ಟಿದ ಎದೆಬಡಿತದ ಒಡನಾಟ!!!

ಬಲಗೈಗೆ ತೊಡಿಸಿದ ಚಿನ್ನದುಂಗುರದ ಬೆಸುಗೆ
ನನ್ನಾಕೆ ಆಗುವವಳೊಂದಿಗಿನ ಸಲುಗೆ
ನಸುಗೆಂಪು ರಂಗಿನ ಸೀರೆಯ ನೆರಿಗೆ
ಪುರೋಹಿತರ ಮಂತ್ರದ ಲಗುಬಗೆ
ಹೂವಿನಹಾರದಲ್ಲಿದ್ದ ಪುಷ್ಪಕುಸುಮದ ಬಿಳುಪು
ಚಿನ್ನದೊಡವೆಯ ಚಿತ್ತಾಕರ್ಷಕ ಹೊಳಪು
ಮಿತ್ರವೃಂದದ ಮಿರುಗು, ಸೋದರ ಸಂಬಂಧಿಯ ಸೊಬಗು
ಮುನ್ನೂರು ಮುತ್ತೈದೆಯರ ಆಶೀರ್ವಚನ
ಇದೆಲ್ಲದಕೂ ಸಾಕ್ಷಿಯಾಗಿತ್ತು --
ಹಳೇ ಬೇರು, ಹೊಸ ಚಿಗುರು ಮತ್ತು ನಿಶ್ಚಿತಾರ್ಥದ ಆ ಸುದಿನ !!!

-- ಕಿರಣ್ ಜಯಂತ್

Tuesday, July 13, 2010

ಕನಸೊಂದು ತಾಕಿತು ನನ್ನೆದೆಯ, ಸಖಿ

ಕನಸೊಂದು ತಾಕಿತು ನನ್ನೆದೆಯ, ಸಖಿ 

ನೀ ಬರುವ ಹಾದಿಯಲ್ಲಿ
ಪುಷ್ಪಕಮಲಗಳ ಹಾಸಿಗೆ ಹಾಸಿ
ನೀ ತುಳಿದ ಮಲ್ಲಿಗೆಯ ಹೆಕ್ಕಿ 
ಕಣ್ಣಿಗೊತ್ತಿಕೊಳ್ಳುವ ಆಸೆ  

ಚಿನ್ನದ ಹರಿವಾಣ ಬೆಳ್ಳಿ ಮಿಳ್ಳೆ ತಂದು 
ಪಾದ ತೊಳೆಯುವಾಸೆ, ಹರಿಶಿಣ-ಕುಂಕುಮ ಹಚ್ಚುವಾಸೆ 
ನಿನ್ನ ಹೆಜ್ಜೆಗುರುತಿನ ನೀಲ ನಕ್ಷೆಯನು 
ತಲೆದಿಂಬು ಮಾಡಿಕೊಳ್ಳುವಾಸೆ

ನೀ ನೋಡೋ ಕಂಗಳಿಂದ ಪ್ರಪಂಚ ಕಾಣುವಾಸೆ 
ನಯನಮನೋಹರಿಯ ಸುಲೋಚನನಾಗುವಾಸೆ 
ಮಿಥ್ಯೆ ತಡೆದು ಭಾವ ತುಂಬಿ ಸುಭಾಷಿತ ನುಡಿಯುವಾಸೆ
ಕಲ್ಲು ಕಡೆದು ಜೀವ ತುಂಬಿ ಅಶ್ಮಿತನಾಗುವಾಸೆ 

ಕಾಮಧೇನು ಹಾಲು ತಂದು ಕುಡಿಸುವಾಸೆ
ನನ್ನ ಉಟ್ಟುಡುಗೆಯ ಅಂಚಿನಲಿ ನಿನ್ನ ಗಲ್ಲ ಒರೆಸುವಾಸೆ 
ನಿನ್ನ ಅಧರದಿಂದುದುರುವ ಸಿಹಿಮುತ್ತು ಆರಿಸುವಾಸೆ 
ಆ ಚಂದ ನಗುವಿನಾರಾಧಕನಾಗುವಾಸೆ 

ಬೆಳ್ಳಿ ರಥದಲಿ ಕೂರಿಸಿ ಕ್ಷೀರಾಭಿಷೇಕ ಮಾಡುವಾಸೆ 
ಆ ರಥದ ಗಾಲಿ ನಾನಾಗುವಾಸೆ 
ಕಲ್ಪತರು ಕಾಯಿ ತರಿಸಿ ಅರ್ಚನೆ ಮಾಡುವಾಸೆ 
ಪಂಚಭೂತ ಧನ್ಯನಾಗುವಾಸೆ!!


ನನಸಾಗುತಲಿದೆ ಸಖಿ ನನ್ನೆದೆಯ ಕನಸು 
ಸುಮಂಗಳೆಯರು ಹಳದಿಚಂದನ ಹಚ್ಚುವ ಹಸೆ 
ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದು,
ಕ್ಷೀರ ಸಾಕ್ಷಿಯಾಗಿ ಕಲ್ಪತರು ಕಾಯಿ ಹಿಡಿದು 
ನೀ ನನ್ನವಳೆಂದು, ನಾ ನಿನ್ನವನೆಂದು ಪ್ರತಿಜ್ಞೆ ಮಾಡುವ ದೆಸೆ!! 


ಕನಸೊಂದು ತಾಕಿತು ನನ್ನೆದೆಯ, ಸಖಿ 
ಮರೆಯಾಗುವುದಾದರೆ ಮರಳಿ ಮಣ್ಣಿನಲಿ ನಿನ್ನನು ಸೇರುವಾಸೆ  
ಏಳೇಳು ಜನುಮದಲೂ ನಿನ್ನಲಿ ಬೆರೆತು ಒಂದಾಗುವಾಸೆ!!

Thursday, July 08, 2010

ಮನದ ಮುಗಿಲಿನಲ್ಲಿ

ಕಾಂತಿಹೀನ ಪಡುನೇಸರ ಬೇಸರ ಕಳೆದು  
ಮೂಡಲದಿಕ್ಕಿನಲಿ ಕಾಂತಿವೆತ್ತ ರವಿಯಾದ 
ನೆಗೆಯುವ ಕೆಂದೂಳಿ ಹೊತ್ತು ತಂದು 
ನೀಲಿ ಬಾನಿಗೆ ಕಿತ್ತಳೆ ಬಣ್ಣ ಬಳಿದ 

ಮುಗಿಲ ಖೈದಿಯಾಗಿ ಬದುಕು ಬೇಡವೆಂದು 
ಮಳೆರಾಯನವನು ಮುಸುಲಧಾರೆಯಾದ    
ಹನಿ ಹನಿ ಮುಂಗಾರು ತಂದು
ಇಳೆಯ ಧಗೆಯ ಲಘುವಾಗಿಸಿದ 

ಹನಿಯು ಬರಿದಾಗಿ ಚಿಂತೆ ಕಾಡಲು 
ಬಿರಿಯುವ ಬಿಸಿಲ್ಗುದುರೆಯಾದ 
ಸಪ್ತ ವರ್ಣಗಳ ಚಿತ್ತಾರ ತಂದು 
ರಂಗು-ರಂಗಿನ ಮಳೆಬಿಲ್ಲು ರಚಿಸಿದ 

ಅಮಾವಾಸ್ಯೆ ಇರುಳ ಕರಿನೆರಳಿಗೆ ಬೆಚ್ಚಿ ಬಿದ್ದು 
ಶಶಾಂಕನವನು ನಾಗಲೋಟದ ಕೋಲ್ಮಿಂಚಾದ 
ಬೆಳ್ಳಿ ಕೊಡೆ ಹೊತ್ತು ತಂದು 
ಕಪ್ಪಡರಿದ ಕಾರ್ಮುಗಿಲಿಗೆ ಕಿಚ್ಚನಚ್ಚಿದ

Sunday, June 20, 2010

ಶಾಲ್ಮಲಾ

ಶಾಲ್ಮಲಾ ನದಿ ಧಾರವಾಡದಲ್ಲಿ ಹುಟ್ಟಿ ಅಂತರಗಂಗೆಯಾಗಿ ಹರಿದು ಮಂಗಳೂರಿನಲ್ಲಿ ಮೇಲೆ ಬರುತ್ತಾಳೆ. ಅಲ್ಲಿನ ಜನಕ್ಕೆ ನೀರನು ಎರೆಯುತ್ತಾಳೆ. ಹೆಚ್ಚಾದ ನೀರು ವ್ಯರ್ಥವಾಗಿ ಅರಬ್ಬೀ ಸಮುದ್ರ ಸೇರುತ್ತದೆ. ಧಾರವಾಡದಲ್ಲಿ ನೋಡಿದರೆ ವಾರಕ್ಕೆ ಒಮ್ಮೆ ನೀರು ಬರುವಂತಹ ಪರಿಸ್ಥಿತಿ. ಅಲ್ಲಿನ ಜನರಿಗೆ ನೀರು-ನಿಡಿ ಇಲ್ಲದೇ ಇರುವಾಗ ತನ್ನೂರಿನ ಶಾಲ್ಮಲಾ ದೂರದೂರಿನ ಜನರಿಗೆ ಪರೋಪಕಾರಿಯಾದರೆ ಧಾರವಾಡದ ಜನರ ಅಳಲನ್ನು ಹೀಗೆ ಬರೆಯಬಹುದೆ? ಉತ್ತರ ಕನ್ನಡ ಭಾಷೆಯಲ್ಲಿ ಬರೆದರೆ ಆ ಅವ್ಯಕ್ತ ಭಾವನೆಗಳು ಹೇಗೆ ಹೊರಹೊಮ್ಮಬಹುದು?

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಬಾಳು ನೀ ಹಂಸಾಲ
ನನ್ನೂರಲಿ ಹುಟ್ಟಿ ದೂರದೂರಿಗೆ ನೀರಡಿಸಾಂವ?
ಹಂಗ್ಯಾಕ್ ಮಾಡ್ಲಿಕ್ ಹೊರಟ್ಯವ್ವ?
ನಿನ್ ತವರೂರಿನ ಹಸಿರು ಬಾಡ್ಯಾಂವಾ,
ಆಕಳು-ಜಾನುವಾರು ದಾಹದಿ ಕಂಗೆಟ್ಟ್ಯಾಂವಾ
ಮೀನೂ-ಜೀಂವ-ಜಂತು ಉಸಿರಿಲ್ದಿ ಸಾಯೋಕ್ ಹೊರಟ್ ನಿಂತ್ಯಾಂವ
ಬಾರೇ ನೀ ಶಾಲ್ಮಲೆ ಜೀವನದಿಯಾಗಿ, ಮರಳಿ ನಿನ್ನೀ ಊರಿಗೆ

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಎದಿ ಮ್ಯಾಗಿನ ಬಾಂದಳದ ಚಂದ್ರಾಲ
ಕೂಲಿ ಎಲ್ಲಾ ನೌಕರಿ ಇಲ್ದಿ ಗುಳೇ ಹೊರಟು ನಿಂತ್ಯಾಂವಾ
ನೇಗಿಲೆಲ್ಲಾ ಚಾಕರಿ ಇಲ್ದಿ ಒಕ್ಕಲು ಮೂಲಿ ಹಿಡಿದ್ಯಾಂವಾ
ಪೂಜಾರಪ್ಪ ಬೆಟ್ಟದ್ ಗುಡೀಲ್ ದ್ಯಾವರ್ ಮುಂದಿ ಕುಂತಾಂವ
ಮಂದೀನ್ ಸೇರ್ಸಿ ಪಟೇಲಪ್ಪ ಪಂಚಾಯಿತಿ ಕರೆದ್ಯಾಂವಾ
ಶಂಖ ಊದ್ಸಿ ಶಾನ್ಬೋಗಪ್ಪ ಶ್ಯಾನೆ ಶಾಸ್ತ್ರ ನೋಡ್ತಾಂವ

ನೀ ಗುಪ್ತ ಯಾಕ ಆದೀ ಶಾಲ್ಮಲಾ?
ನನ್ ಬಾಳು ನೀ ಬೆಳದಿಂಗಳ
ಬೊಂಬಾಯ್ ಕಾರ್ಖನಿ ಮುಚ್ಲೇಬೇಕಂತ
ಸೆಟ್ಟರ ಮಗ ಸೆಟಗೊಂಡಾಂವ
ರಾಸಿ ಅರಿವಿ ಲಗೂನೆ ಒಗಿಬ್ಯಾಕಂತ
ಅಗಸನ ಹೆಂಗ್ಸು ಪಟ್ ಹಿಡಿದ್ಯಾಳ
ಹಳ್ಳಿ ಹೈಕ್ಳು ಬಿಡಲೊಲ್ಲಿ ನಿನ್ನ ಬ್ಯಾರೆ ಊರಿಗೆ
ನಂಬು ನಮ್ಮನ್ ಎಂದ್ ನಿನ್ ಕರೆದ್ಯಾಂವಾ
ಗೌಡನ್ ಹೈದ ಕದಲೊಲ್ಲಿ ಪ್ರಾಣ ಬಿಟ್ರೂ ಖರೆ
ನೆಚ್ಚು ನನ್ನ ಎಂದ್ ನಿನ್ ಕೂಗ್ಯಾಂವಾ
ನೀ ಹಿಂಗ್ಯಾಕ ಮಾಡಿ ಹೋದಿ ಎಂದಾಂವಾ
ಮಾರಿ ತಿರುಗ್ಸಿ ಹಂಗ್ಯಾಕೆ ನೀ ಮುನಿಸಿಕೊಂಡ್ಯಾಂವಾ?

ನೀ ಸುಪ್ತದೀಪ್ತಿ ಯಾಕ ಆದೀ ಶಾಲ್ಮಲಾ?
ನನ್ನಯ ಭಾಗ್ಯದ ಹಂಸಾಲ,
ನನ್ನೆದೆಯ ಫಸಲಿಂದು ಕೊಳೆಯಾಂವ
ಕಸದ ಬದಲಿ ರಸವ ತೆಗೆದು ಹೊಚ್ಚ ಹೊಸ ಪೈರ ಬೆಳೆಯಾಂವ
ನಿನ್ ದಂಡಿ ಮ್ಯಾಲೆ ಕೂತು ಗಾಳಿಪಟ ಹಾರಾಸಾಂವಾ
ಪಟ ಹರಿದು ನೆಲ ಕಚ್ಚರೂ ಅಲ್ಲೇ ಕುಂತು ಬಿಡಾಂವಾ
ಬಾರೇ ನೀ ಶಾಲ್ಮಲೆ ಹುಬ್ಬಳ್ಳಿ-ಧಾರವಾಡ ಕೇರಿಗೆ,
ಮರಳಿ ನಿನ್ನೀ ಊರಿಗೆ...ನನ್ನೀ ಗೂಡಿಗೆ
ಗುಪ್ತಗಾಮಿನಿ ಓ ಶಾಲ್ಮಲಾ,
ನನ್ ಉಸಿರು ನೀ ನೂರ್ಕಾಲ...

ಸ್ಫೂರ್ತಿ: ನನ್ನ ಈ ಕವನಕ್ಕೆ ಸ್ಫೂರ್ತಿ ಮಾಲತಿ ಪಟ್ಟಣಶೆಟ್ಟಿಯವರು ಬರೆದಿರುವ ಶಾಲ್ಮಲಾ ನದಿ ಬಗೆಗಿನ ಪದ್ಯ

Monday, May 24, 2010

ನಮ್ಮೊಳಗೊಬ್ಬ ನಾಜೂಕಯ್ಯ

ಕಳೆದವು ಮಂಗಳವಾರಗಳು
ಮರಳಿದವು ಗುರುವಾರಗಳು
ಅಬ್ಬಬ್ಬಾ ಮುಂಜಾನೆ ೮:೩೦ ಗೆ ಕರೀತೀರಲ್ರೀ ಶನಿವಾರ ಕೂಡ
ಭಾನುವಾರ ಕೂಡ ರಜೆ ಇಲ್ವಾ ಮ್ಯಾಡಂ?
ಸನ್ನಿವೇಲ್ ದೇಗುಲದ ಪ್ರೀತಿ ಭೋಜ್
ತಪ್ಪಿದರೆ ಅರ್ಚನ-ವತ್ಸ-ಶರ್ಮಿಳ ಮನೆಯವರ ಊಟ ಹರ್ ರೋಜ್
ಹೀಗೆ ಸಾಗಿತ್ತು ನಮ್ ರಿಹರ್ಸಲ್ಲು
"ಭಾವುಕ ಮಿಲನ"ದ ಮೊದಲ ಮೈಲಿಗಲ್ಲು
ಈ ನೆನಪಿನ ದೋಣಿಯಲ್ಲಿ ಸಿಕ್ಕರು ಹಲವರು
ಹೆಚ್ಚು ಹತ್ತಿರವಾದರು ಕೆಲವರು

ಮೊನಚಿನ ಮಾತಿನ ಶರ್ಮಿಳ ಮ್ಯಾಡಂ
ಒಮ್ಮೆ ಅಭ್ಯಾಸಕೆ ಹಾಜರಿ ತಪ್ಪಿದರೆ ಅವ್ರು ಬಹಳ ಗರಂ
ಕೂರಿಸಿ ಓದಿಸಿ ಶುರುವಾದ ಅಭ್ಯಾಸ ಸೆಷನ್ನು
ತಪ್ಪು ಒಪ್ಪುಗಳಿಗಿಲ್ಲ ಅಲ್ಲಿ ಮಾರ್ಜಿನ್ನು
ಅರಿವಿಲ್ಲದಂತೆಯೇ ತರಿಸಿತ್ತು ಹಾವ ಭಾವಗಳನ್ನು
ಕಲಿಸಿತ್ತು ನಟನೆಯ ಸೂಕ್ಷಾತಿಸೂಕ್ಷ್ಮಗಳನ್ನು

ಬಂದಿತ್ತಾಗಲೇ ತಾರೀಖು ಮೇ ಇಪ್ಪತ್ಮೂರು
ಹವ್ಯಾಸಿ ರಂಗಭೂಮಿ ಆಸಕ್ತರ "ನಾಟಕ ಚೈತ್ರ"ದ ಬ್ಯಾನ್ನರ್ರು

ಸೃಜನಶೀಲ ಸೌಜನ್ಯರ ಕಲೆ ಕೌಶಲ್ಯದ ಮ್ಯಾಜಿಕ್ಕು
ಸಂಗೀತ ಸರಸ್ವತಿ ಗಾರ್ಗಿ ಪಂಚಾಂಗಂ ಆಲಾಪವದು ಕರಾರುವಾಕ್ಕು
ಕೀಲಿಮಣೆಯ ಮೇಲೆ ಅಭಿಜಿತ್ ರ ಕೈಚಳಕ
ಬೆಳಕಿಗೆ ವಿನಯ್ ಹೆಗ್ಡೆ, ಮೈಕಿನ ಹಿಂದೆ "ಹೆಡ್ ಮೇಡಂ" ಮೋನಿಕ
ಮೇಕಪ್ ಮಾಡಿ ಮೊಗಕೆ ಮೆರುಗು ನೀಡಿದರು ವಿಜಯ
ಸಹಾಯ ಹಸ್ತ ಚಾಚಿದ ಶರಣ್, ವಿದ್ಯಾಧರ, ಕಿರಣ್ ಮಯ್ಯ, ಗಿರೀಶ್, ಗುಬ್ಬಿ, ಅಜಯ್ ಮತ್ತು ತಂಡ
ಟಿಕೇಟುಗಳ ಲೆಕ್ಕ ಇಟ್ಟು ಜೊತೆ ನೀಡಿದರು ಪ್ರಶಾಂತ್ ಪಡುಬಿದ್ರಿ
ಸುತ್ತೋಲೆಗಳ ಕಳಿಸಿ ಸಾಥ್ ನೀಡಿದವರು ಕನ್ನಡ ಕೂಟದ ಬಳಗ

ಅರಳಿದಳು ರಂಗಮಂಚೆ "ನಾಟಕ ಚೈತ್ರ"ಳಾಗಿ
ತೆರೆದಳು ಮತ್ತೊಂದು ಪ್ರಪಂಚವ ಸಭಿಕರ ನಿಬ್ಬೆರಗಾಗುವಂತೆ ಮಾಡಿ

ಒಬ್ಬರನೊಬ್ಬರ ಮೀರಿಸುವಂತೆ ನಟಿಸಿದ ಪಾತ್ರಧಾರಿಗಳು
"ನಮ್ಮೊಳಗೊಬ್ಬ ನಾಜೂಕಯ್ಯ"ನಿಗೆ ಜೀವ ತುಂಬಿದರು

"ಸಾರಿಗೆ ಸಚಿವ ಖದಂಗೆ ಸ್ವಲ್ಪ ರಸಿಕತೆ ಹೆಚ್ಚಿಗೆ, ಅದಕ್ ನಾ ಎನ್ ಮಾಡ್ಲಿ"
"ಬರೋಬ್ಬರಿ ಹೇಳಿದ್ರಿ ಸರಾ?"
ಉತ್ತರ ಕರ್ನಾಟಕ ಭಾಷೆಯಲ್ಲಿ ಮೊನಚಿನ ಮಾತುಗಳೊಂದಿಗೆ
ಮನ ಸೂರೆಗೊಂಡರು ನಾರಾಯಣ ಸ್ವಾಮಿಗಳು
"ಪಾಲಿಟಿಕ್ಸ್ ನಲ್ಲಿ ಇಷ್ಟು ವರ್ಷದಿಂದ ಇದೀನಲ್ಲಮ್ಮ"
ಖಾದಿ ವಸ್ತ್ರ ಗಾಂಧಿ ಟೊಪ್ಪಿಗೆ ತೊಟ್ಟು ಮಿರಿ ಮಿರಿ ಮಿಂಚಿ ನೆನಪಲಿ ಉಳಿವರು
ಹಗಲುವೇಷ ತೊಟ್ಟ ಭ್ರಷ್ಟ ಮಂತ್ರಿ ಮಿನಿಸ್ಟರ್ ಪಾಟೀಲರು

"ಹೂಮ್ ಸಾ, ನನ್ ಹೆಂಡ್ತಿ ಗಂಡ ನಾನೇ ಸಾ"
ಬದುಕಿನ ಕಟ್ಟಲೆಗಳನ್ನೇ ಅರಿಯದ ಮುಗ್ಧ ಫೋಟೋಗ್ರಾಫರ್
"ಸರ್, ನನ್ ಬ್ಯಾಂಕ್ ಅಲ್ಲಿ 200 ರುಪಾಯಿ ಇದೆ ಕೊಡ್ತೀನಿ, ನಿಮ್ ಸಾಲ ತೀರ್ಸಿಬಿಡಿ ಸರ್"
ಮುಗ್ಧ ನಿಷ್ಕಪಟ ಸಮಾಜ ಬಿಂಬಿಸುವ "ದುರ್ಬಲ ಕೊಂಡಿ" ಈ ಮಹಾದೇವ ಜಾಗಿರ್ದಾರ್
"ಗೋ ಗೋ ಗೋ, ನನ್ ನಾಯಿಗೆ ಸ್ನಾನ ಮಾಡಿಸಬೇಕು"
ಇಟಾಲಿಯನ್ ನಾಯಿ ಮೇಲಿನ ಹುಚ್ಚು ಪ್ರೀತಿಯ ಮುಖ ಒಂದೆಡೆ
"ಕೇಸ್ ಬುಕ್ ಮಾಡ್ಸಿ ಒಳಗೆ ಹಾಕ್ಸಿಬಿಡ್ತೀನಿ, ಹುಷಾರ್"
ಗುಡುಗಿ ಸದ್ದಡಗಿಸಿದ ಲಂಚಕೋರ ಡೈರೆಕ್ಟರ್ ದ್ವಿಮುಖ ಇನ್ನೊಂದೆಡೆ

"ನಮ್ ಫಾದರ್ ಗ್ರಾಂಡ್ ಫಾದರ್ ಇಬ್ರೂ ಹೋಗ್ಬಿಟ್ರಲ್ಲಾ?"
"ಯಲ್ಲಿ"
"ಲಂಡನ್"ನಲ್ಲಿ
ನಕ್ಕು ನಗಿಸಿದರು ರೀಟಾ ಚಬಲಾನಿ
"ಯಂಗ್ ಮ್ಯಾನ್, ಮೈ ನೇಮ್ ಇಸ್ ಕೆ.ಆರ್.ಚಬಲಾನಿ"
ಹೌಹಾರುವಂತೆ ಮಾಡಿದರು ಕಿಶೋರ್ ಆರ್ ಚಬಲಾನಿ

"ಡ್ಯಾಡಿ ನೀವು ಬೇರೇನೆ ಮೀಟಿಂಗ್ ಶುರು ಮಾಡ್ಬಿಟ್ರಲ್ಲಾ, ಹೀಗಾದ್ರೆ ನಂಗೆ ಬರ್ತ್-ಡೇನೆ ಬೇಡ"
ಉಲಿದಳು ನುಲಿದಳು ಮಿನಿಸ್ಟರ್ ಮಗಳು ನೀತಿ
ಸ್ವಾಮಿ ನಿಷ್ಠ ಪ್ರಭಾಕರನೊಬ್ಬ
"ಹೇಯ್ ನಕ್ಸಲೈಟ್, ನಿನ್ನ ರೆಡ್ ಲೈಟ್ ಮಾಡ್ಬಿಡ್ತೀನಿ"
ಬೆದರಿಸುವ ಪುಂಡ-ಪುಡಾರಿ ಗುರುದಾಸಪ್ಪ
"ಮೂರು ಪರ್ಸೆಂಟ್ ಹೆಚ್ಚಿಗೆ ಕೊಡಿ..ಪ್ರಭಾಕರ ಫಿನಿಶ್"
ಕಪಟಿ ಬೆಂಕಿ ಪಟ್ಟಣದ ಅಗ್ನಿಹೋತ್ರಿ

ನಿಷ್ಠೆಯಿಂದ ಯಶಸ್ಸು ಗಳಿಸಬೇಕೆಂಬ ನಾಯಕ ಶಿವಪ್ರಸಾದನ ಛಲವಾದಿ ಪಯಣ
ಪರಿಸ್ಥಿತಿಯ ಕೈಗೊಂಬೆಯಾಗಿ ನರಳುವ ನಾಯಕಿ ಮಾಲತಿಯ ಮೌನರೋದನ
ಭ್ರಷ್ಟ ವ್ಯವಸ್ಥೆಯ ಚಕ್ರವ್ಯೂಹದಲ್ಲಿ ಸಿಲುಕಿ ತನ್ನ ತತ್ವ-ಆದರ್ಶಗಳನ್ನು ಗಾಳಿಗೆ ತೂರುವ ನಾಯಕನ ನರಳುವ ಮನ
ಹಾದರಕ್ಕೆ ಇಳಿಯುವಂತ ಸ್ಥಿತಿ ತಂದೊಡ್ಡಿದ ವಿಧಿಯಾಟದಲ್ಲಿ ಕುದಿದು ಸೊರಗುವ ನಾಯಕಿಯ ಹೃದಯ
ತೆರೆಯ ಮೇಲೆ ಕೊನೆಯ ಪರದೆ ಬೀಳುತ್ತಾ ಹೋದಂತೆ, ಆ ಕೊನೆಯ ದೀಪವು ಆರುತ್ತ ಹೋದಂತೆ
ಪ್ರೇಕ್ಷಕ ತನ್ನೊಳಗೊಬ್ಬ ನಾಜೂಕಯ್ಯನಿದ್ದಾನೆಯೇ ಎಂದು ಶೋಧಿಸಲಣಿಯಾದನಂತೆ
ಮನ ಮುಟ್ಟಿದ ಕಥನ...ಕಿವಿಗಡಚಿಕ್ಕುವ ಕರತಾಡನ...

Monday, May 17, 2010

ಮೇ ೨೩ರ "ನಾಟಕ ಚೈತ್ರ" – ೨ ಅತ್ಯುತ್ತಮ ನಾಟಕಗಳು!!


ಮೇ ೨೩ರ "ನಾಟಕ ಚೈತ್ರ"ದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ? ರಂಗಭೂಮಿ ಹವ್ಯಾಸಿ ಕಲಾವಿದರ ತಂಡ ನಿಮಗೆಂದು ೨ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ. ಬೇ ಏರಿಯಾದ ಹೆಸರಾಂತ ನಿರ್ದೇಶಕಿ ಶರ್ಮಿಳ ವಿದ್ಯಾಧರರವರ ನಿರ್ದೇಶನದಲ್ಲಿ ಹಲವು ಪ್ರವೀಣ ಮತ್ತು ಪಳಗಿದ ಕಲಾವಿದರ ಜೊತೆ ಹೊಸ ಪ್ರತಿಭೆಗಳ ಸಮ್ಮಿಲನ ಈ ಕಾರ್ಯಕ್ರಮದ ವಿಶೇಷ.

ನಮ್ಮೊಳೊಗೊಬ್ಬ ನಾಜೂಕಯ್ಯ
‘ಮಾಯಾಮೃಗ’, ‘ಮುಕ್ತಾ ಮುಕ್ತಾ’ ಮತ್ತು ‘ಮನ್ವಂತರ’ಗಳಂಥಾ ಮರೆಯಲಾಗದ ಧಾರಾವಾಹಿಗಳನ್ನು ಕೊಟ್ಟ ಟಿ.ಎನ್. ಸೀತಾರಾಮ್ ಅವರು ಬರೆದ ಈ ನಾಟಕ, ನಿಷ್ಠೆಯಿ೦ದ ಯಶಸ್ಸು ಗಳಿಸಬೇಕೆಂಬ ಓರ್ವ ಉದ್ಯಮಿಯ ಪಯಣದಲ್ಲಿ ಭೃಷ್ಟ ವ್ಯವಸ್ಥೆಯ ಅನುಯಾಯಿಗಳು ಎಸೆಯುವ ಸವಾಲುಗಳು, ಆತ ಎದುರಿಸುವ ದ್ವಂದಗಳ ಮಾರ್ಮಿಕ ಘಟನೆಗಳನ್ನು ನಿರೂಪಿಸುತ್ತದೆ. ಛಲವಾದಿ ನಾಯಕ ದೃಢತೆಯಿ೦ದ ಆ ಕದನವನ್ನು ಗೆಲ್ಲಬಲ್ಲನೆ ಅಥವಾ ತಾನು ನ೦ಬಿದ ಆದರ್ಶಗಳನ್ನು ಗಾಳಿಗೆ ತೂರಿ ಸೋತು ಶರಣಾಗುವನೆ?
ಬನ್ನಿ, ವೀಕ್ಷೀಸಿ...ನಮ್ಮೆಲ್ಲರ ಮನದಾಳದಲ್ಲಿಯೂ ಓರ್ವ ನಾಜೂಕಯ್ಯನಿದ್ದಾನೋ ಎಂದು ಶೋಧಿಸಿ.....

ಕೊರಿಯಪ್ಪನ ಕೊರಿಯೋಗ್ರಫಿ
ಹನಿಗವನದ ಸಾಮ್ರಟರ ಎಂದು ಖ್ಯಾತರಾಗಿರುವ ಕವಿ ಎಚ್. ದುಂಡಿರಾಜ್ ಅವರು ರಚಿಸಿರುವ ಅನೇಕ ನಾಟಕಗಳಲ್ಲಿ ಕೊರಿಯಪ್ಪನ ಕೊರಿಯೋಗ್ರಫಿ ತಿಳಿ ಹಾಸ್ಯವನ್ನು ಬಳಸಿ ತಮ್ಮದೆ ಆದ ಸಾಹಿತ್ಯಲೋಕಕ್ಕೆ ಒಂದು ವಿಡಂಬನಾತ್ಮಕ ನೋಟವನ್ನು ಬೀರಿದ್ದಾರೆ. "ಅನುರಾಗ" ಪತ್ರಿಕೆಯವರು ಸಾಹಿತಿ ಕೊರಿಯಪ್ಪನವರನ್ನು ಸಂದರ್ಶನ ಮಾಡಲು ಇಚ್ಚಿಸಿದ್ದು ಆತನಿಗೆ ಒದಗಿ ಬರುವ ಅನಿರೀಕ್ಷಿತ ಅದೃಷ್ಟ. ಸಂದರ್ಶನ ನೀರೀಕ್ಷೆ ಕೊರಿಯಪ್ಪನ ಮನೆಯಲ್ಲಿ ಉಂಟು ಮಾಡುವ ಸಡಗರ ಹಾಗು ಸಂದರ್ಶನದ ಸಮಯದಲ್ಲಿ ಉಂಟಾಗುವ ಅನೇಕ ಹಾಸ್ಯಮಯ ಸನ್ನಿವೇಶಗಳಿಂದ ಈ ನಾಟಕವು ರಂಜನೀಯವಾಗಿದೆ

Tuesday, March 02, 2010

ಮ್ಯಾಡ್ ಆಡ್ಸ್

ಕನ್ನಡ ಕೂಟ ಉತ್ತರ ಕ್ಯಾಲಿಫೊರ್ನಿಯ ಏರ್ಪಡಿಸಿದ್ದ "ಸ್ನೇಹ ಸಪ್ತಮಿ" ಕಾರ್ಯಕ್ರಮದಲ್ಲಿ ನಾನು ನಿರ್ದೇಶಿಸಿ, ನಿರೂಪಿಸಿ ಮತ್ತು ಧ್ವನಿ ಕೊಟ್ಟ "ಮ್ಯಾಡ್ ಆಡ್ಸ್":

ಧ್ವನಿ: ಕಿರಣ್ ಜಯಂತ್
ನಟಿಸಿದವರು: ಮಾಳವಿಕ, ಶ್ವೇತ, ಕ್ರಿಷ್ಣ ಸದಾಶಿವಂ, ಕ್ರಿಷ್ಣ ಪ್ರಸಾದ್, ಚೇತನ್, ಪವನ್ ಮತ್ತು ರಾಘವೇಂದ್ರ


ಭಾಗ 1:
http://www.youtube.com/watch?v=FkpWH9TTP8U

ಭಾಗ 2:
http://www.youtube.com/watch?v=2vE71ICupqU

Thursday, July 23, 2009

ಯಾವ ಮೋಹನ ಮುರಳಿ ಕರೆಯಿತು

Whale Watching @ Monterrey Bay, CA captured in my D-SLR

ಮಾಂಟೆರೆ ಕೊಲ್ಲಿಗೆ "Whale Watching" ಗೆ ಹೋದಾಗ ಆ ಬ್ರುಹದಾಕಾರದ ತಿಮಿಂಗಲವ ಕಂಡು ಹೀಗನ್ನಿಸದೇ ಇರಲಿಲ್ಲ!!
(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)ಬಾನೆತ್ತರೆಕೆ ಚಿಮ್ಮುತಾ
ದೊಡ್ಡ ದನಿಯ ಉಸಿರೆಳೆಯುತಾ
ಕುಣಿಯುತಾ, ನಲಿಯುತಾ
ಯಾಕೆ ಓಡಿ ಹೋಗುವೆ ನೀ ಬಿಂಕದ ಸಿಂಗಾರಿ

ದಿಗಂತದ ಮಿತಿ ಅಳೆಯುವ ಆಸೆಯೇ?
ಕ್ಷಿತಿಜದ ವ್ಯಾಪ್ತಿ ತಿಳಿಯುವ ಹುಚ್ಚು ಹಂಬಲವೇ?
ಅಥವಾ
ಬಾನಂಚಿನ ಎಲ್ಲೆ ಮೆಟ್ಟುವ ಕಲ್ಪನೆಯೇ?
ಓ ಮತ್ಸ್ಯ ಸುಂದರಿ...

ನಮ್ಮಯ ಕಂಡು
ದುಷ್ಟರಿಂದ ದೂರ ಇರು ಎಂದು ನೆನೆದೆಯಾ?
ಮುಟ್ಟದಿರು ನೀ ನನ್ನ,
ಮುಟ್ಟಿ ಮಲಿನ ಮಾಡದಿರು ನನ್ನ ಓ "ಮನುಜ ಕ್ರಿಮಿ"
ಎಂದು ಶಪಥ ಮಾಡಿದೆಯಾ?
ನೀ ಹಂಸ ವೈಯ್ಯಾರಿ

ನಿನ್ನಯ ಈ ಹಾರಿಕೆಯ ಓಟವ ನೋಡಿದರೆ
ನನಗೊಂದೇ ಹಾಡು ನೆನಪಾಗುವುದು
"ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಇರುವದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ "
ನಿನ್ನಲಿ ನನ್ನಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಪೇಕ್ಷೆ
ಅದೇ ಹಾಡು, ಅದೇ ಪ್ರಶ್ನೆ
ಅದೇ ಮಾತು, ಅದೇ ಮೌನ,
ಉತ್ತರ ಮಾತ್ರ ದಿಟ ಶೂನ್ಯ


Saturday, July 12, 2008

Colorodo ನದಿ ನಿರ್ಮಿಸಿದ "ವಿಸ್ಮಯಲೋಕ"


(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)

ಜುಲೈ 4 2008: "ಗ್ರಾಂಡ್ ಕಾನ್ಯನ್"
ಮೇಲಿನ ಚಿತ್ರಪಟದಲ್ಲಿ ವ್ಯಕ್ತಿಯೋರ್ವನ ಮುಖದಂದಿರುವ ನಿಸರ್ಗ-ನಿರ್ಮಿತ ಕಲ್ಲು ಮಾತಾಡಿದಂತೆ ಭಾಸವಾದಾಗ ಹೀಗನ್ನಿಸದೇ ಇರಲಿಲ್ಲ...

ಚಿಮ್ಮಿ ಬಂದ ಸೂರ್ಯನೊಬ್ಬ
Grand Canyon ದ್ರುಶ್ಯ ವೈಭವವ
ಬೆಳಗಿಸಲು...
ಆಹ್-ಊಹ್ ಉದ್ಗಾರ-ಜಯಘೋಷಗಳ
ಮೊಳಗಿಸಲು...

ಮನದೊಳು ಮೂಡಿತ್ತಲ್ಲಿ ಸಂತಸಭಾವ

ಆಕಾಶಕ್ಕೆ ಏಣಿ ಹಾಕಲೇ..
ಹಕ್ಕಿಯಾಗಿ ಹಾರಲೇ..
ಅಂಚಿನಿಂದ ಅಂಚಿಗೆ ನೆಗೆಯಲೇ..
ಮಾತಾಡಲೊಲ್ಲೆಯಾ ವಿಸ್ಮಯಲೋಕವೇ?

ಕೊಲೊರೊಡೊ ನದಿಗೆ ಕಾದಿತ್ತಲ್ಲಿ ನೂರೆಂಟು ಪ್ರಶ್ನೆಗಳು

ಆಗಸದೊಂದಿಗೆ ಬಿರುಕೇ?
ಇಳೆಯೊಡನೆ ಒಡಕೇ?
ಯಾಕೀ ಮುನಿಸು.
ಯಾಕೀ ದಿರಿಸು..
ಯಾಕೀ ಭಗೀರಥ ಪ್ರಯತ್ನ...

ಮನಸ್ತಾಪವ ತೋರಿ
ಭೂ-ಗರ್ಭವ ಸೀಳಿ
ಭಿನ್ನಾಭಿಪ್ರಾಯವ ಜಗಕೆ ಸಾರಿ
ಪ್ರುಥ್ವಿಯೊಡಲ ಛಿದ್ರಿಸಿ
ಯಾಕೀ ಹಾವ!!
ಯಾಕೀ ಭಾವ!!!


(ದೊಡ್ಡ ಚಿತ್ರಪಟಕ್ಕೆ ಫೋಟೊ ಮೇಲೆ ಕ್ಲಿಕ್ಕಿಸಿ)